ಜೈನ ಸಂದೇಶ ಬೆಳಗಾವಿ :
ಬೆಳಗಾವಿ ಜಿಲ್ಲೆಯಲ್ಲಿ ಅತಿ ಹೆಚ್ಚು ಜೈನರನ್ನ ಕಾಣಬಹುದು ಜೊತೆಗೆ ಜೈನರಿಗಾಗಿ ತನ್ನದೆಯಾದ ಇತಿಹಾಸವನ್ನ ಕೂಡಾ ಬೆಳಗಾವಿ ಹೊಂದಿದೆ ಎಂದರೆ ತಪ್ಪಾಗಲಿಕ್ಕಿಲ್ಲ. ಬೆಳಗಾವಿಯ ಪೂರ್ವ ಭಾಗದ ಕೋಟೆ ಕೆರೆ ಬಳಿಯಲ್ಲಿ ವಿಶಾಲವಾದ 12ನೇ ಶತಮಾನದ ಬೆಳಗಾವಿ ಕೋಟೆಯಿದೆ. ಕರ್ನಾಟಕದ ಅತ್ಯಂತ ಹಳೆಯ ಕೋಟೆಗಳಲ್ಲಿ ಜೈನ ಬಸದಿಗಳನ್ನು ಹೊಂದಿದೆ. ಬಸದಿಯ ಪ್ರತಿಯೊಂದರ ವಾಸ್ತುಶಿಲ್ಪವೂ ಅದ್ಭುತ ಮತ್ತು ಧಾರ್ಮಿಕ ಸಾಮರಸ್ಯದ ಜೀವಂತ ಉದಾಹರಣೆಯಾಗಿದೆ.
‘ಕಮಲ ಬಸದಿ’ ಇದು ಶ್ರೀ ನೇಮಿನಾಥ ತೀರ್ಥಂಕರ ದೇವಸ್ಥಾನ ಎಂಬ ಜೈನ ದೇವಾಲಯವಾಗಿದ್ದು, ಕಮಲ ಬಸದಿ ಎಂದೇ ಹೆಚ್ಚು ಜನಪ್ರಿಯವಾಗಿದೆ. ಇಲ್ಲಿನ ದೇವಸ್ಥಾನದ ರಂಗಮಂಟಪದ ಛಾವಣಿಯಲ್ಲಿ ಕಮಲದ ದಳಗಳನ್ನು ಕೆತ್ತಲಾಗಿದ್ದು, ಪ್ರವಾಸಿಗರನ್ನು ಬೆರಗುಗೊಳಿಸುತ್ತದೆ. ಈ ಆಕರ್ಷಕ ಸ್ಮಾರಕವು ಬಸದಿಯು ರಾಂಪಾರ್ಟ್ ರಸ್ತೆಯ ಕೊನೆಯಲ್ಲಿ ಕೋಟೆಯೊಳಗೆ ಅಡಗಿ ಕುಳಿತಂತಿದೆ. ಇದರ ಸುತ್ತಲೂ ಹಚ್ಚ ಹಸಿರು ಹೊದ್ದು ಕಂಗೊಳಿಸುತ್ತಿದೆ.

ಜೈನ ಕಮಲ ಬಸದಿಯ ಇತಿಹಾಸ :
ಕ್ರಿ.ಶ.1204 ರಲ್ಲಿ ಈ ಕಮಲ ಬಸದಿಯನ್ನು ರಟ್ಟ ರಾಜವಂಶದ ರಾಜ ನಾಲ್ಕನೆಯ ಕಾರ್ತವೀರ್ಯನ ಕಾಲದಲ್ಲಿ ಮಂತ್ರಿಯಾಗಿದ್ದ ಬಿಚಿರಾಜನು ಕಟ್ಟಿಸಿದನು. ಬೆಳಗಾವಿಯನ್ನು ಚಾಲುಕ್ಯರು, ರಾಷ್ಟ್ರಕೂಟರು, ರಟ್ಟರು, ಗೋವಾ ಕದಂಬರು, ಯಾದವರು, ವಿಜಯನಗರದ ಅರಸರು, ಬಹುಮನಿಗಳು, ಮರಾಠರು ಮತ್ತು ಬ್ರಿಟಿಷರು ಸೇರಿದಂತೆ ಹಲವಾರು ರಾಜವಂಶಗಳು ಆಳಿವೆ. ಈ ಕೋಟೆಯನ್ನು ವಿವಿಧ ಆಡಳಿತಾವಧಿಯಲ್ಲಿ ಅನೇಕ ಬಾರಿ ಪುನರ್ನಿರ್ಮಿಸಲಾಗಿದ್ದರೂ, ಬಸದಿಯು ಗಟ್ಟುಮುಟ್ಟಾಗಿ ನಿಂತಿದೆ ಮತ್ತು ಸುಮಾರು 800 ವರ್ಷಗಳ ಹಿಂದಿನ ಸ್ಥಳೀಯ ಕುಶಲಕರ್ಮಿಗಳ ಕೌಶಲ್ಯಕ್ಕೆ ಸಾಕ್ಷಿಯಾಗಿದೆ.
ಈ ಬಸದಿಯನ್ನು ರಟ್ಟರ ಕಾಲಘಟ್ಟದಲ್ಲಿ ನಿರ್ಮಿಸಿದ್ದರೂ, ಇದು ಪಶ್ಚಿಮ ಚಾಲುಕ್ಯರ ಶೈಲಿಯ ವಾಸ್ತುಶಿಲ್ಪದಿಂದ ಪ್ರಭಾವಿತವಾಗಿ ಮುಖಮಂಟಪ ಮತ್ತು ಗರ್ಭಗೃಹಗಳನ್ನು ಒಳಗೊಂಡಿದೆ. ದೇಗುಲದ ಮೇಲೆ ಶ್ರೇಣೀಕೃತ ಛಾವಣಿಯನ್ನು ಹೊಂದಿದೆ. ಮುಖಮಂಟಪವನ್ನು ಅಲಂಕರಿಸಿರುವುದು ತಲೆಕೆಳಗಾದ ಬೃಹತ್ ಕಲ್ಲಿನಲ್ಲಿ ಕೆತ್ತಿದ ಕಮಲವಾಗಿದೆ. ಇದರಿಂದಲೇ ಇದನ್ನು ಕಮಲ ಬಸ್ತಿ ಎಂದೂ ಕರೆಯುತ್ತಾರೆ.

ಒಂದೇ ರೀತಿಯಲ್ಲಿ ಕಾಣುವಂತೆ ಕೆತ್ತಲಾಗಿರುವ ಕಮಲದ ದಳಗಳು ಆಶ್ಚರ್ಯಚಕಿತರನ್ನಾಗಿಸುತ್ತವೆ. ಬೆಳೆಯುತ್ತಿರುವ ತಂತ್ರಜ್ಞಾನದ ಉದಯದ ವೇಳೆಯೂ ಹಿಂದಿನ ತಲೆಮಾರುಗಳ ಕುಶಲತೆಯ ಬಗ್ಗೆ ಅಚ್ಚರಿ ಉಂಟಾಗುತ್ತದೆ. ದಳಗಳ ಕೆತ್ತನೆಯ ಒಳಗೆ ತೀರ್ಥಂಕರರ ಚಿತ್ರಗಳಿವೆ.
ಕಮಲದ ದಳಗಳ ಮೇಲೆ ಒಟ್ಟು 72 ತೀರ್ಥಂಕರರ ಚಿತ್ರಗಳು ಕಂಡುಬರುತ್ತವೆ. ಇದು ಹಿಂದಿನ, ಪ್ರಸ್ತುತ ಮತ್ತು ಭವಿಷ್ಯದ 24 ತೀರ್ಥಂಕರರನ್ನು ಪ್ರತಿನಿಧಿಸುತ್ತದೆ ಎಂದು ನಂಬಲಾಗಿದೆ. ನಾಲ್ಕು ದಿಕ್ಕುಗಳನ್ನು ಸೂಚಿಸುವ ಕೆತ್ತಿದ ದಿಗ್ಪಾಲ ದೇವತೆಯೊಂದಿಗೆ ಭವ್ಯವಾದ ಚಾವಣಿಯು ಎಂಟು ಕಂಬಗಳ ಮೇಲೆ ಭಾಗಶಃ ನಿಂತಿದೆ.
ಮುಖಮಂಟಪದಿಂದ ದೂರದಲ್ಲಿರುವ ಕೋಣೆ ಭಕ್ತರಿಗೆ ಪ್ರಾರ್ಥನಾ ಮಂದಿರವಾಗಿದೆ. ಇದು ಭಾಗಶಃ ತೆರೆದ ಸೀಲಿಂಗ್ನೊಂದಿಗೆ ಗೋಡೆಗಳು ಮತ್ತು ಬಾಗಿಲುಗಳ ಮೇಲೆ ವಿನ್ಯಾಸಗಳನ್ನು ಹೊಂದಿದೆ. ಚೌಕಾರವಾಗಿರುವ ಮುಂದಿನ ಕೋಣೆಯಾದ ಗರ್ಭಗೃಹದದ ಮಧ್ಯದಲ್ಲಿ 22ನೇ ತೀರ್ಥಂಕರರಾದ ನೇಮಿನಾಥರ ಧ್ಯಾನಮುದ್ರೆಯ ಸಿದ್ದಾಸನ ಮೂರ್ತಿ ಇದೆ.
ವಿಗ್ರಹದ ಹಿನ್ನೆಲೆಯಲ್ಲಿ ಕಲ್ಲಿನಿಂದ ಕೆತ್ತಿದ ಕಲ್ಪವೃಕ್ಷವನ್ನು ಹೊಂದಿದೆ. ಈ ಗರ್ಭಗೃಹದಲ್ಲಿ ತೀರ್ಥಂಕರಿಗೆ ದಿನನಿತ್ಯದ ಆಚರಣೆಗಳನ್ನು ಮಾಡಲಾಗುತ್ತದೆ. ಸದ್ಯಕ್ಕೆ ಈ ಬಸದಿಯು ಬಲವಾದ ಮತ್ತು ಗಟ್ಟಿಮುಟ್ಟಾಗಿ ಕಾಣುತ್ತಿದೆಯಾದರೂ, ಪರಂಪರೆಯನ್ನು ಸಾರುವ ಈ ತಾಣದ ಸಂರಕ್ಷಣೆಯನ್ನು ಭಾರತೀಯ ಪುರಾತತ್ವ ಸರ್ವೇಕ್ಷಣಾ ಇಲಾಖೆ (ASI) ಬಹಳ ಹಿಂದೆಯೇ ಕೈಗೆತ್ತಿಕೊಂಡಿದೆ.
ಬೆಳಗಾವಿಯ ಐತಿಹಾಸಿಕ ಕೋಟೆ(ಕಿಲ್ಲಾ)ಯಲ್ಲಿರುವ ಈ ಸ್ಮಾರಕ ಹಿಂದಿನ ಕಾಲದ ಇತರ ಪ್ರಸಿದ್ಧ ಸ್ಮಾರಕಗಳಿಗೆ ಹೋಲಿಸಿದರೆ ಚಿಕ್ಕದು. ಆದರೆ ಹೋಗಿ ನೋಡಿದಾಗ ಸುಮಾರು ಎಂಟು ನೂರು ವರ್ಷಗಳಿಗೂ ಹಿ೦ದಿನ ಈ ಜೈನ ದೇವಾಲಯ “ಮೂರ್ತಿ ಚಿಕ್ಕದಾದರೂ ಕೀರ್ತಿ ದೊಡ್ಡದು” ಎಂಬ ಗಾದೆಗೆ ಉತ್ತಮ ಉದಾಹರಣೆ ಎನಿಸುತ್ತದೆ.
ಚಾಲುಕ್ಯ ಶೈಲಿಯ ಈ ಬಸದಿಯನ್ನು ರಟ್ಟ ರಾಜವಂಶದ ನಾಲ್ಕನೆಯ ಕಾರ್ತವೀರ್ಯನ ಕಾಲದಲ್ಲಿ ಆತನ ಮಂತ್ರಿಯಾದ ಬಿಚಿರಾಜನು ಕಟ್ಟಿಸಿದನು. ರಟ್ಟರು ರಾಷ್ಟ್ರಕೂಟರ ಅಚ್ಚ ಕನ್ನಡ ಸಾಮಂತ ರಾಜರು. ಮೊದಲು ಸುಗಂಧವರ್ತಿ (ಈಗಿನ ಸವದತ್ತಿ) ಮತ್ತು ನಂತರ ವೇಣುಗ್ರಾಮ (ಬೆಳಗಾವಿ)ದಿಂದ ರಾಜ್ಯವಾಳಿದರು. ಅವರ ಕಾಲದಲ್ಲಿ ಪಾರಸಗಡ ಮತ್ತು ಬೆಳಗಾವಿಯ ಕೋಟೆಗಳು ಕಟ್ಟಲ್ಪಟ್ಟವು. ಕಮಲ ಬಸದಿಯ ಕಂಬಗಳು ಕಪ್ಪು ಗ್ರಾನೈಟ್ ಕಲ್ಲಿನಲ್ಲಿ ಕೆತ್ತಲ್ಪಟ್ಟಿದ್ದು, ಅದೆಷ್ಟು ನುಣುಪಾಗಿವೆಯೆಂದರೆ, ಅವುಗಳಲ್ಲಿ ನಮ್ಮ ಪ್ರತಿಬಿಂಬ ಕಾಣಬಹುದು.

ಬಸದಿಯ ಪ್ರಾಕಾರದಿಂದ ಗರ್ಭಗುಡಿಯವರೆಗೆ ಒಟ್ಟು ನಾಲ್ಕು ಬಾಗಿಲುಗಳಿದ್ದು, ಪ್ರತಿ ಬಾಗಿಲಿನಲ್ಲಿ ಸೂಕ್ಷ್ಮವಾದ ಕೆತ್ತನೆಯ ಕೆಲಸವಿದ್ದು, ಒಳಗಿನ ಕಂಬಗಳಲ್ಲಿ ಕೂಡಾ ಸುಂದರವಾಗಿ ಕಲ್ಲಿನಲ್ಲಿ ಮೂಡಿಸಿದ ಚಿತ್ತಾರಗಳಿವೆ. ಸುಂದರ ವಿನ್ಯಾಸಗಳಲ್ಲದೇ ಅನೇಕ ಪೌರಾಣಿಕ ಪ್ರಸಂಗಗಳ ಕೆತ್ತನೆಯನ್ನು ಕಾಣಬಹುದು. ಗರ್ಭ ಗುಡಿಯಲ್ಲಿರುವ ಭಗವಾನ್ ನೇಮಿನಾಥನ ದಿವ್ಯವಾದ ಕಪ್ಪು ಶಿಲೆಯ ಮೂರ್ತಿ ಗುಡಿಗಿಂತಲೂ ಹಳೆಯದು. ಈ ಮೂರ್ತಿ ಸುಮಾರು ಎರಡು ನೂರು ವರ್ಷಗಳ ಹಿಂದೆ ಕಾಡಿನಲ್ಲಿ ದೊರೆಯಿತು.
ಭಗವಾನ್ ನೇಮಿನಾಥನ ವಿಗ್ರಹದ ಹಿಂದೆ ಇರುವ ಪ್ರಭಾವಳಿಯು ಅತ್ಯಂತ ವಿಶಿಷ್ಟವಾದದ್ದು. ಕಲ್ಪ ವೃಕ್ಷ, ಕಾಮಧೇನು ಮತ್ತು ಅನೇಕ ಜೀವ ಜಂತುಗಳ ಸೂಕ್ಷ್ಮ ಕೆತ್ತನೆ ಈ ಪ್ರಭಾವಳಿಯನ್ನು ಅಲಂಕೃತಗೊಳಿಸಿ ಗರ್ಭ ಗುಡಿಯ ದಿವ್ಯತೆಗೆ ಮೆರುಗು ತಂದಿವೆ. ನೇಮಿನಾಥನ ವಿಗ್ರಹದ ಜೊತೆಗೆ ಕಪ್ಪುಶಿಲೆಯ ನವಗೃಹವಿದೆ. ಭಗವಾನ್ ಸುಮತಿನಾಥ, ಭಗವಾನ್ ಪಾರ್ಶನಾಥ ಮತ್ತು ಭಗವಾನ್ ಆದಿನಾಥರ ಸುಂದರ ವಿಗ್ರಹಗಳನ್ನು ಕೂಡ ಕಾಣಬಹುದು.
1204 ರಲ್ಲಿ, ಬೆಳಗಾವಿ ಕೋಟೆಯ ಗೋಡೆಗಳ ಒಳಗೆ ಎರಡು ಬಸದಿ ಅಥವಾ ವಸಾಹತುಗಳನ್ನು ನಿರ್ಮಿಸಲಾಯಿತು, ಅದರಲ್ಲಿ ಒಂದನ್ನು ಕಮಲಾ ಬಸದಿ ಎಂದು ಹೆಸರಿಸಲಾಗಿದೆ. ಇದನ್ನು ಚಾಲುಕ್ಯರ ಶೈಲಿಯಲ್ಲಿ ನಿರ್ಮಿಸಲಾಗಿದೆ ಮತ್ತು ಇದು ಕಪ್ಪು ಕಲ್ಲಿನಲ್ಲಿ ನೇಮಿನಾಥ ವಿಗ್ರಹವನ್ನು ಹೊಂದಿದೆ. ಈ ಸ್ಥಳದ ಮುಖ್ಯ ಮುಖ್ಯಾಂಶವೆಂದರೆ ‘ಮುಖಮಂಟಪ’ ಇದು ಕಮಲವನ್ನು ಚಾವಣಿಯ ಮೇಲೆ ಕೆತ್ತಲಾಗಿದೆ.