ಜೈನ ಸಂದೇಶ ಹುಕ್ಕೇರಿ (ಬೆಳಗಾವಿ) :

ಬೆಳಗಾವಿ ಜಿಲ್ಲೆಯ ಹುಕ್ಕೇರಿ ತಾಲೂಕಿನ ಹಲವೆಡೆ ಪ್ರಾಚೀನ ಗತ ವೈಭವ ಸಾರುವ ಶಿಲಾ ಶಾಸನಗಳು ದೊರಕಿವೆ, ದೊರಕುತ್ತಿವೆ. ಅದರಲ್ಲೂ ಜೈನ ಇತಿಹಾಸ ಸಾರುವ ಶಾಸನಗಳು ಬಹಳಷ್ಟು ದೊರಕಿವೆ. ಪ್ರಮುಖವಾಗಿ ನದಿಪಾತ್ರದಲ್ಲಿ ಇರುವ ಗ್ರಾಮಗಳಲ್ಲಿ ಜೈನರ ವಾಸ್ತವ್ಯ ಕುರುಹಗಳು ಕಂಡು ಬಂದಿವೆ. ಶಿಲಾ ಶಾಸನಗಳ ಕುರಿತೊಂದು ಮಾಹಿತಿ

ಜೈನರಿಲ್ಲದ ಊರಲ್ಲಿ ಜೈನ ತೀರ್ಥಂಕರ ಶಾಸನ ಪತ್ತೆ :

ಹುಕ್ಕೇರಿ ತಾಲೂಕಿನ ಬೆಣಿವಾಡ ಗ್ರಾಮದಲ್ಲಿ ಒಂದು ಜೈನ ಮನೆತನ ಇಲ್ಲ. ಆದರೆ ಆ ಗ್ರಾಮದಲ್ಲಿ ಹಲವಾರು ಜೈನ ಮೂರ್ತಿಗಳು ದೊರಕಿವೆ. ಇತ್ತೀಚೆಗೆ ಆ ಗ್ರಾಮದ ಓರ್ವರ ಮನೆಯ ಹಿತ್ತಲಲ್ಲಿ ಸ್ವಚ್ಚತೆ ಮಾಡುವ ಸಂದರ್ಭದಲ್ಲಿ ಒಂದು ಅಡಿ ಎತ್ತರದ ಜೈನ ಮೂರ್ತಿ ದೊರೆತಿದೆ. ಇದನ್ನು ಕೆಂಪು ಕಲ್ಲಿನಲ್ಲಿ ಕೆತ್ತಲಾಗಿದೆ. ತೀರ್ಥಂಕರ ಸಿದ್ದಾಸನದ ಮೂರ್ತಿ ಬಲಬದಿಯಲ್ಲಿ ಆಕಳು ಕರುವಿಗೆ ಹಾಲುಕುಡಿಸುವ ಶಿಲೆ ಇದೆ.

ಜಿನಮೂರ್ತಿಯ ಎಡಗಡೆಯಲ್ಲಿ ಖಡ್ಗವಿದೆ. ಮೇಲ್ಭಾಗದ ಎಡಗಡೆಯಲ್ಲಿ ಅರ್ಧಚಂದ್ರ ಮತ್ತು ಬಲಬದಿಯಲ್ಲಿ ಸೂರ್ಯನ ಕೆತ್ತನೆಯಿದೆ. ಇದೇ ಗ್ರಾಮದಲ್ಲಿ ಸವದತ್ತಿ ರಟ್ಟರಸರ ಒಂಭತ್ತನೆಯ ಶತಮಾನದ ಒಂಭತ್ತು ಸಾಲಿನ ಶಾಸನ ದೊರೆತಿದ್ದನ್ನು ಗಮನಿಸಿದಾಗ ಇದೂ ಕೂಡ ಅದೇ ಕಾಲದ್ದಾಗಿರಬಹುದು. ಇದು ಸೀಮೆಗಲ್ಲಾಗಿದ್ದು ಇದನ್ನು ಯಾರಾದರು ಹಾಳು ಮಾಡಿದರೆ ಅವರು ಶಿಕ್ಷೆಗೆ ಗುರಿಯಾಗುತ್ತಾರೆಂಬ ಸಂಕೇತವಾಗಿ ಖಡ್ಗವನ್ನು ಕೆತ್ತಲಾಗಿದೆ ಎಂದು ಇತಿಹಾಸ ಸಂಶೋಧಕ ಡಾ.ಬಿ.ಆರ್.ಹಂದೂರ ಹೇಳಿರುವರು.

ಇದೇ ತೆರನಾಗಿ ಹುಕ್ಕೇರಿ ತಾಲೂಕಿನ ಯಾದಗೂಡದಲ್ಲಿ ಯಾದವ ಕನ್ನರದೇವನ ಶಾಸನ ಪತ್ತೆ ಕ್ರಿ.ಶ.ಹನ್ನೆರಡನೆಯ ಶತಮಾನದ ಯಾದವ ಕನ್ನರದೇವನ ಶಾಸನ ಪತ್ತೆಯಾಗಿದೆ. ಹುಕ್ಕೇರಿ ಪ್ರದೇಶವು ಸವದತ್ತಿ ರಟ್ಟರಸರ ಆಳ್ವಿಕೆಯ ವ್ಯಾಪ್ತಿಗೆ ಒಳಪಟ್ಟಿತ್ತು. ಇವರ ಅಧಿರಾಜರಾದ ಯಾದವರು ಬೆಳಗಾವಿಯ ಪಶ್ಚಿಮ ಭಾಗದಲ್ಲಿ ಆಳ್ವಿಕೆ ನಡೆಸಿದ ಸಮಯದ ಶಿಲಾಶಾಸನ ಯಾದಗೂಡ ಗ್ರಾಮದಲ್ಲಿ ದೊರೆತಿದೆ. ಇದರಲ್ಲಿ 20 ಸಾಲುಗಳಿವೆ. ಮೇಲೆ ಶಿವಲಿಂಗ ಅದರ ಎಡಗಡೆಯಲ್ಲಿ ಯೋಧನು ಖಡ್ಗ ಹಿಡಿದು ನಿಂತಿದ್ದಾನೆ. ಬಲಬದಿಯಲ್ಲಿ ನಂದಿ ಮತ್ತು ಮೇಲ್ಮುಖವಾಗಿ ನಿಲ್ಲಿಸಿದ ಖಡ್ಗವನ್ನು ಕೆತ್ತಲಾಗಿದೆ. ಯಾದವ ಕನ್ನರ ದೇವನ ರಾಜ ಸ್ತುತಿಯಿಂದ ಪ್ರಾರಂಭವಾಗುವ ಶಾಸನ ಸೀಮೆಯನ್ನು ಉಲ್ಲೇಖಿಸುತ್ತದೆ.

ಯಾದಗೂಡ ಲಕ್ಷ್ಮಣ ಪೋಳ ಅವರ ಮನೆಯ ಹುಣಸಿಗಿಡದ ಪಕ್ಕದಲ್ಲಿರುವ ಹುಣಸೆ ಗಿಡದ ಪಕ್ಕದಲ್ಲಿ ಬೋರಲಾಗಿ ಬಿದ್ದುಕೊಂಡಿದೆ. ಇದರ ವಿವರಗಳನ್ನು ಸಂಪೂರ್ಣವಾಗಿ ಓದಿದ ನಂತರ ತಿಳಿಯುತ್ತದೆ ಎಂದು ಸಂಶೋಧಕ ಡಾ.ಬಿ.ಆರ್.ಹಂದೂರ ತಿಳಿಸಿದ್ದಾರೆ.

ಹಿಡಕಲ್ ಜಲಾಶಯ ಅಕ್ಕಪಕ್ಕದ ಗ್ರಾಮಗಳಲ್ಲಿ ಜೈನರ ಆಳ್ವಿಕೆ ಹೆಚ್ಚಾಗಿತ್ತು ಎಂಬುದಕ್ಕೆ ಅಲ್ಲಿ ದೊರೆತ ಶಿಲಾಶಾಸನಗಳು ಸಾಕ್ಷೀಕರಿಸಿವೆ. ಪ್ರಸ್ತುತ ಶಾಸನಗಳು ದೊರೆತ ಊರುಗಳಲ್ಲಿ ಒಂದು ಜೈನರ ಮನೆತನ ಇಲ್ಲದಿರುವುದು ವಿಚಿತ್ರವಾದರೂ ಸತ್ಯ.