ಜೈನ ಸಂದೇಶ ಹಳಿಂಗಳಿ (ಬಾಗಲಕೋಟೆ ಜಿಲ್ಲೆ) :

ಭಾರತೀಯ ಸಂಸ್ಕೃತಿಯ ಇತಿಹಾಸದಲ್ಲಿ ಜೈನ ಧರ್ಮ ಹಾಗೂ ಶ್ರಮಣ ಸಂಸ್ಕೃತಿಗೆ ವಿಶಿಷ್ಟವಾದ ಸ್ಥಾನವಿದೆ. ಪ್ರಥಮ ತೀರ್ಥಂಕರರಾದ ಆದಿನಾಥ ಭಗವಂತರು ಮಾನವ ಸಮಾಜಕ್ಕೆ ಅಸಿ, ಮಸಿ, ಕೃಷಿ ಸೇರಿದಂತೆ ಜೀವನೋಪಯೋಗಿ ಕಲೆಗಳನ್ನು ಬೋಧಿಸಿ ಮೋಕ್ಷಮಾರ್ಗವನ್ನು ತೋರಿಸಿಕೊಟ್ಟರು. ಭಾರತೀಯ ಶ್ರಮಣ ಸಂಸ್ಕೃತಿಯ ಆರಂಭಕ್ಕೆ ಆದಿನಾಥ ಭಗವಂತರೇ ಮೂಲಪುರುಷರು ಎಂದು ಕುಲರತ್ನ ಮುನಿಮಹಾರಾಜರು ತಿಳಸಿದ್ದಾರೆ.

ಬಾಗಲಕೋಟೆ ಜಿಲ್ಲೆಯ ತೇರದಾಳ ತಾಲೂಕಿನ ಹಳಿಂಗಳಿ ಜೈನ‌ ಮಠದಲ್ಲಿ ಜೈನ ಸಂದೇಶ ಸುದ್ದಿ ವಾಹಿನಿ ಜೊತೆ ಮಾತನಾಡಿದ ಮಹರಾಜರು ಆದಿನಾಥ ಭಗವಂತರ ನಂತರ 24 ತೀರ್ಥಂಕರರ ಪರಂಪರೆ ಜೈನ ಧರ್ಮದಲ್ಲಿ ಮುಂದುವರಿದಿದ್ದು, ಭಗವಾನ ಮಹಾವೀರರವರೆಗೆ ಈ ಆಧ್ಯಾತ್ಮಿಕ ಪರಂಪರೆ ಮಾನವಕುಲಕ್ಕೆ ಅಹಿಂಸೆ, ಸತ್ಯ, ತ್ಯಾಗ ಹಾಗೂ ಆತ್ಮಕಲ್ಯಾಣದ ಸಂದೇಶವನ್ನು ನೀಡಿದೆ ಎಂದರು.

ಭಾರತದ ತ್ರಿವರ್ಣ ಧ್ವಜದಲ್ಲಿರುವ ಕೇಸರಿ ಬಣ್ಣ ತ್ಯಾಗದ ಸಂಕೇತವಾಗಿದ್ದು, ಬಿಳಿ ಬಣ್ಣ ಶಾಂತಿಯ ಪ್ರತೀಕವಾಗಿದೆ. ಹಸಿರು ಬಣ್ಣ ಸಮೃದ್ಧಿಯನ್ನು ಸಾರುತ್ತದೆ. ಧ್ವಜದ ಮಧ್ಯದಲ್ಲಿರುವ 24 ಕಡ್ಡಿಗಳ ಅಶೋಕ ಚಕ್ರ ಧರ್ಮದ ಮಹತ್ವವನ್ನು ಪ್ರತಿಬಿಂಬಿಸುತ್ತದೆ. ತ್ಯಾಗದಿಂದ ನಿಜವಾದ ಸುಖ ದೊರೆಯುತ್ತದೆ ಎಂಬ ಸಂದೇಶವನ್ನು ಭಾರತೀಯ ಸಂಸ್ಕೃತಿ ಸಾರುತ್ತದೆ ಎಂದು ವಿವರಿಸಿದರು.

ಭಾರತದ ರಾಷ್ಟ್ರೀಯ ವೃಕ್ಷವಾದ ಆಲದ ಮರ ಆದಿನಾಥ ಭಗವಂತರ ದೀಕ್ಷೆ ಹಾಗೂ ಕೇವಲಜ್ಞಾನಕ್ಕೆ ಸಂಬಂಧಿಸಿದ ವೃಕ್ಷವಾಗಿದೆ. ರಾಷ್ಟ್ರೀಯ ಪಕ್ಷಿಯಾದ ನವಿಲಿನ ಗರಿಗಳಿಂದ ಜೈನ ಮುನಿಗಳು ಬಳಸುವ ಪಿಂಚಿಯನ್ನು ತಯಾರಿಸಲಾಗುತ್ತದೆ. ಇದು ಅಹಿಂಸೆ ಮತ್ತು ಜೀವದಯೆಯ ಪ್ರತೀಕವಾಗಿದೆ. ನೆಲಕ್ಕೆ ಉದುರಿದ ನವಿಲುಗರಿಗಳನ್ನು ಬಳಸುವ ಮೂಲಕ ಯಾವುದೇ ಜೀವಿಗೆ ಹಾನಿಯಾಗದಂತೆ ಎಚ್ಚರ ವಹಿಸಲಾಗುತ್ತದೆ ಎಂದು ತಿಳಿಸಿದರು.

ಅದೇ ರೀತಿ ರಾಷ್ಟ್ರೀಯ ಪುಷ್ಪವಾದ ಕಮಲವು ಜೈನ ಧರ್ಮದಲ್ಲಿ ವಿಶೇಷ ಮಹತ್ವ ಹೊಂದಿದೆ. ತೀರ್ಥಂಕರರ ಆಸನ ಕಮಲಾಸನವಾಗಿದ್ದು, ಸಮವಶರಣದ ಆಧ್ಯಾತ್ಮಿಕ ಪರಿಕಲ್ಪನೆಯಲ್ಲಿಯೂ ಕಮಲಕ್ಕೆ ಪ್ರಮುಖ ಸ್ಥಾನವಿದೆ. ಅಶೋಕ ಸ್ತಂಭದ ರಾಷ್ಟ್ರೀಯ ಲಾಂಛನದಲ್ಲಿರುವ ನಾಲ್ಕು ಸಿಂಹಗಳ ಸಂಕೇತದ ಬಗ್ಗೆಯೂ ಅವರು ಜೈನ ಧರ್ಮದ ಸಮವಶರಣದ ಪರಿಕಲ್ಪನೆಯನ್ನು ವಿವರಿಸಿದ್ದಾರೆ.

ಜೈನ ಧರ್ಮವು ಯಾವುದೇ ಒಂದು ಜಾತಿಗೆ ಸೀಮಿತವಾದ ಧರ್ಮವಲ್ಲ. ಅದು ಇಡೀ ವಿಶ್ವದ ಕಲ್ಯಾಣವನ್ನು ಬಯಸುವ ಧರ್ಮವಾಗಿದೆ. ನಮೋಕಾರ ಮಂತ್ರವು ವ್ಯಕ್ತಿ ಪೂಜೆಯ ಬದಲಾಗಿ ಅರಿಹಂತರು, ಸಿದ್ಧರು, ಆಚಾರ್ಯರು, ಉಪಾಧ್ಯಾಯರು ಹಾಗೂ ಸಾಧುಗಳಂತಹ ಪಂಚಪರಮೇಷ್ಠಿಗಳಿಗೆ ನಮಿಸುವ ಮಹತ್ವದ ಮಂತ್ರವಾಗಿದೆ. ಅಹಿಂಸೆ, ಸಂಯಮ, ತ್ಯಾಗ ಮತ್ತು ಆತ್ಮಶುದ್ಧಿಯ ಮೂಲಕ ವಿಶ್ವದಲ್ಲಿ ಶಾಂತಿ ಹಾಗೂ ಸಮೃದ್ಧಿಯನ್ನು ಸ್ಥಾಪಿಸುವುದೇ ಜೈನ ಧರ್ಮದ ಮೂಲ ಆಶಯವಾಗಿದೆ ಎಂದು ಕುಲರತ್ನ ಮುನಿಮಹಾರಾಜರು ತಿಳಿಸಿದ್ದಾರೆ.