ಜೈನ ಸಂದೇಶ ತೇರದಾಳ (ಬಾಗಲಕೋಟೆ ಜಿಲ್ಲೆ) :

ಜೈನ ಸಮಾಜದ ವಿವಿಧ ನ್ಯಾಯಯುತ ಬೇಡಿಕೆಗಳ ಈಡೇರಿಕೆ ಹಾಗೂ ಜೈನ ನಿಗಮ ಮಂಡಳಿ ಸ್ಥಾಪನೆಗೆ ಆಗ್ರಹಿಸಿ ಬಾಗಲಕೋಟೆ ಜಿಲ್ಲೆಯ ತೇರದಾಳ ಪಟ್ಟಣದ ಜೀನಸೇನ ಆಚಾರ್ಯ ಗುರುಕುಲದಲ್ಲಿ ನಿರ್ಣಾಯಕ ಜೈನ ಸಮಾಜ ಮಹಾಮಂಥನ ಮಹಾಸಭೆ ನಡೆಯಿತು.

ಪರಮಪೂಜ್ಯ ರಾಷ್ಟ್ರಸಂತ ಆಚಾರ್ಯ ಶ್ರೀ 108 ಗುಣಧರನಂದಿ ಮಹಾರಾಜರ ಪವಿತ್ರ ಸಾನಿಧ್ಯದಲ್ಲಿ ನಡೆದ ಸಭೆಯಲ್ಲಿ ಜೈನ ಸಮಾಜದ ಪ್ರಮುಖರು ಹಾಗೂ ಸಮುದಾಯದ ಬಂಧುಗಳು ಭಾಗವಹಿಸಿ, ಸಮಾಜದ ಏಕತೆ, ಅಭಿವೃದ್ಧಿ ಮತ್ತು ವಿವಿಧ ಬೇಡಿಕೆಗಳ ಈಡೇರಿಕೆ ಕುರಿತು ಚರ್ಚಿಸಿದರು.

ಸಭೆಯಲ್ಲಿ ಜೈನ ನಿಗಮ ಮಂಡಳಿ ಸ್ಥಾಪನೆ, ಜೈನ ವಿದ್ಯಾರ್ಥಿಗಳಿಗೆ ಹಾಸ್ಟೆಲ್ ಸೌಲಭ್ಯ, ವಿದ್ಯಾರ್ಥಿವೇತನ, ಜೈನ ದೇಗುಲಗಳ ಸಂರಕ್ಷಣೆ ಹಾಗೂ ಜೈನ ಸಾಧು-ಸಂತರಿಗೆ ಸೂಕ್ತ ರಕ್ಷಣೆ ಸೇರಿದಂತೆ ಹಲವು ಬೇಡಿಕೆಗಳನ್ನು ಸರ್ಕಾರದ ಮುಂದಿಡಲಾಯಿತು.

ಡಿ.ಕೆ. ಶಿವಕುಮಾರಗೆ ಚಪ್ಪಾಳೆ ಮೂಲಕ ಅಭಿನಂದನೆ!

ಜೈನ ನಿಗಮ ಮಂಡಳಿ ಸ್ಥಾಪನೆಗೆ ಆರ್ಥಿಕ ಇಲಾಖೆಯಿಂದ ಅನುಮೋದನೆ ದೊರೆತ ಹಿನ್ನೆಲೆಯಲ್ಲಿ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ ಅವರಿಗೆ ಗುಣಧರನಂದಿ ಮಹಾರಾಜರು ಚಪ್ಪಾಳೆ ತಟ್ಟುವ ಮೂಲಕ ಅಭಿನಂದನೆ ಸಲ್ಲಿಸಿದರು.

ಡಿ.ಕೆ. ಶಿವಕುಮಾರ ಅವರು ಸೌಜನ್ಯದಿಂದ ವರೂರ ಮಠಕ್ಕೆ ಕಾಂಗ್ರೆಸ್ ಅಧ್ಯಕ್ಷರನ್ನು ಕರೆಸಿ ನಿಗಮ ಮಂಡಳಿ ವಿಚಾರವಾಗಿ ಚರ್ಚಿಸಿರುವುದನ್ನು ಮಹಾರಾಜರು ಸ್ಮರಿಸಿದರು. ಯು.ಟಿ. ಖಾದರ್, ಲಕ್ಷ್ಮಣ ಸವದಿ, ಸಂತೋಷ ಲಾಡ್, ಸತೀಶ ಜಾರಕಿಹೊಳಿ, ಗಣೇಶ ಹುಕ್ಕೇರಿ ಹಾಗೂ ಲಕ್ಷ್ಮೀ ಹೆಬ್ಬಾಳಕರ ಸೇರಿದಂತೆ ಹಲವು ನಾಯಕರು ಜೈನ ಸಮಾಜದ ಬೇಡಿಕೆಗಳಿಗೆ ಬೆಂಬಲ ನೀಡಿದ್ದಾರೆ ಎಂದು ತಿಳಿಸಿದರು.

ಜೈನ ನಿಗಮ ಮಂಡಳಿ ಸ್ಥಾಪನೆಯಾಗುವವರೆಗೆ ಸಿಎಂ ಡಿ.ಕೆ. ಶಿವಕುಮಾರ ಅವರೊಂದಿಗೆ ಮಾತನಾಡುವುದಿಲ್ಲ. ಡಿಕೆಸಿ ನನ್ನ ಶಿಷ್ಯ ನಿಗಮ ಮಂಡಳಿ ಮಾಡುತ್ತಾರೆ ಎನ್ನುವ ನಂಬಿಕೆ ನನಗಿದೆ ಎಂದು ಹೇಳಿದ ಮಹಾರಾಜರು, ನಿಗಮ ಮಂಡಳಿ ರಚನೆಯಾದ ಬಳಿಕ ಉತ್ತರ ಕರ್ನಾಟಕದವರಿಗೆ ನಿಗಮ ಮಂಡಳಿ ಅಧ್ಯಕ್ಷ ಸ್ಥಾನ ನೀಡಬೇಕು ಎಂದಿದ್ದಾರೆ.

10 ದಿನಗಳ ಗಡುವು – ಸರ್ಕಾರಕ್ಕೆ ಎಚ್ಚರಿಕೆ

ಜೈನ ಸಮಾಜದ ನ್ಯಾಯಯುತ ಬೇಡಿಕೆಗಳನ್ನು ಸರ್ಕಾರ ಶೀಘ್ರ ಈಡೇರಿಸಬೇಕು. ಮುಂದಿನ 10 ದಿನಗಳಲ್ಲಿ ಸಿಹಿ ಸುದ್ದಿ ನೀಡದಿದ್ದರೆ ಸರ್ಕಾರಕ್ಕೆ ಕಹಿ ಸುದ್ದಿ ನೀಡಬೇಕಾಗುತ್ತದೆ ಎಂದು ಗುಣಧರನಂದಿ ಮಹಾರಾಜರು ಎಚ್ಚರಿಕೆ ನೀಡಿದ್ದಾರೆ.

ಜೈನ ಸಮಾಜದ ಸಂಕಷ್ಟದ ಸಂದರ್ಭದಲ್ಲಿ ಬೆಂಬಲಕ್ಕೆ ಬಾರದ ಜನಪ್ರತಿನಿಧಿಗಳಿಂದ ಸಮಾಜಕ್ಕೆ ಏನು ಪ್ರಯೋಜನ ಎಂದು ಪ್ರಶ್ನಿಸಿದ ಅವರು, ಸಮಾಜಕ್ಕೆ ನಿಗಮ ಂಡಳಿ‌ಮಾಡಲು ಬೆಂಬಲ ನೀಡದೆ ಹೋದರೆ ಅಂತಹ ಶಾಸಕರಿಗೆ ಜೈನರು ಮತ ನೀಡಬಾರದು ಎಂದು ಕರೆ ನೀಡಿದರು.

ಡಿಸೆಂಬರ್ 4ರಿಂದ ಚಿಕ್ಕೋಡಿ ಇಂದ ಬೆಳಗಾವಿ ಜೈನ ಚಲೋ ಪಾದಯಾತ್ರೆ :

ಬೆಳಗಾವಿಯಲ್ಲಿ ನಡೆಯಲಿರುವ ವಿಧಾನಮಂಡಲ ಅಧಿವೇಶನಕ್ಕೂ ಮುನ್ನ ಜೈನ ಸಮಾಜದ ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿ ಡಿಸೆಂಬರ್ 4ರಿಂದ ಚಿಕ್ಕೋಡಿಯಿಂದ ಬೆಳಗಾವಿಯ ಸುವರ್ಣಸೌಧದವರೆಗೆ ಪ್ರತಿಭಟನಾ ಪಾದಯಾತ್ರೆ ನಡೆಸಲು ಸಭೆಯಲ್ಲಿ ನಿರ್ಧರಿಸಲಾಗಿದೆ.

ಜೈನ ಸಮಾಜದ ಹಕ್ಕುಗಳು, ಸಾಮಾಜಿಕ, ಶೈಕ್ಷಣಿಕ ಹಾಗೂ ಆರ್ಥಿಕ ಸ್ಥಾನಮಾನಕ್ಕಾಗಿ ಹೋರಾಟವನ್ನು ಮತ್ತಷ್ಟು ತೀವ್ರಗೊಳಿಸುವ ಕುರಿತು ಮುಖಂಡರು ರೂಪರೇಷೆ ಸಿದ್ಧಪಡಿಸಿದರು.

ಜೈನ ಸಮಾಜದ ಬೇಡಿಕೆಗಳಿಗೆ ಸರ್ಕಾರ ಯಾವ ರೀತಿಯಲ್ಲಿ ಸ್ಪಂದಿಸಲಿದೆ? ಡಿಸೆಂಬರ್ 4ರ ಜೈನ ಚಲೋ ಪಾದಯಾತ್ರೆ ಯಾವ ಸ್ವರೂಪ ಪಡೆದುಕೊಳ್ಳಲಿದೆ? ಎಂಬುದು ಇದೀಗ ಕುತೂಹಲ ಮೂಡಿಸಿದೆ.